ಸಾಲೊಗೂಪ್, ಫೆಡರ್
 	1863-1927. ರಷ್ಯದ ಕವಿ, ಕಾದಂಬರಿ ಕಾರ, ನಾಟಕಕಾರ ಹಾಗೂ ಸಣ್ಣಕಥೆ, ಪ್ರಬಂಧಗಳ ರಚನಕಾರ, ಸಂಕೇತವಾದಿಗಳೊಂದಿಗೆ ತನ್ನನ್ನು ಗುರುತಿಸಿಕೊಂಡಾತ. ಆಧುನಿಕ ರಷ್ಯನ್ ಸಾಹಿತ್ಯದಲ್ಲಿ ಅತಿನವುರಾದ, ಸುಸಂಸ್ಕರಣವಾದ ಕವಿತೆಗಳನ್ನು ಇವನು ಬರೆದಿದ್ದಾನೆ. ಸ್ವರ್ಗದ ಬಯಕೆ, ಜಗತ್ತಿನ ದುಷ್ಟತನಗಳನ್ನು ಇವನ ಹಲವು ಕವನಗಳು ನಿರೂಪಿಸುತ್ತವೆ. ಕಾಮೋದ್ರೇಕ, ಶಾಂತಿಯ ಅನ್ವೇಷಣೆ ಮೊದಲಾದವು ಇವನ ಕಾದಂಬರಿಗಳ ವಸ್ತು. ಸುಲಭವೂ ಸರಳವೂ ಆದ ಛಂದಸ್ಸನ್ನು ಕಾವ್ಯಗಳಲ್ಲಿ ಅನುಸರಿಸಿದ್ದಾನೆ. ಇವನ ಶಬ್ದಸಂಪತ್ತು ಮಿತವಾದದ್ದಾದರೂ ಖಚಿತವಾದ, ಲಲಿತ ಪದ ಪ್ರಯೋಗಗಳು ಇವನ ವೈಶಿಷ್ಟ್ಯ. ಪುಟ್ಟಪಿಶಾಚಿ (1907) - ಇವನ ಪ್ರಸಿದ್ಧ ಕಾದಂಬರಿ. ಇದರಲ್ಲಿ ಬರುವ ಪೆರೆಡೊನೊವ್ ಬದುಕಿನ ಉಲ್ಲಾಸವನ್ನರಿಯದವ. ಇತರರ ಉಲ್ಲಾಸವನ್ನೂ ದ್ವೇಷಿಸುವ, ಕ್ರೌರ್ಯದಲ್ಲಿಯೇ ಸಂತೋಷವನ್ನು ಕಾಣುವ ಭಯಾನಕ ಪಾತ್ರವಿದು.	  
  (ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ